ಭುಟ್ಟೋ, ಜುಲ್‍ಫಿಕರ್ ಅಲಿ	
	1928_79. ಪಾಕಿಸ್ತಾನದ ಒಬ್ಬ ರಾಜಕಾರಣಿ. ಅದರ ಅಧ್ಯಕ್ಷರೂ ಪ್ರಧಾನಿಯೂ ಆಗಿದ್ದವರು. ಜನನ 1928ರಲ್ಲಿ. ಆಗ ಭಾರತದ ಒಂದು ಪ್ರಾಂತ್ಯವಾಗಿದ್ದು ಈಗ ಪಾಕಿಸ್ತಾನದಲ್ಲಿರುವ ಸಿಂಧ್ ಲಾರ್ಕಾನಾದಲಿದೆ. ಇದು ಪ್ರಾಚೀನ ನಾಗರಿಕತೆಯ ನೆಲೆಗಳಲ್ಲೊಂದಾದ ಮೆಹೆಂಜೊದಾರೋಗೆ ಸುಮಾರು 32 ಕಿಮೀ ದೂರದಲ್ಲಿರುವ ಒಂದು ಸ್ಥಳ. ತಂದೆ ಸರ್ ನವಾಜ್ ಖಾನ್ ಭುಟ್ಟೋ ಆ ಪಾಂತ್ಯದ ದೊಡ್ಡ ಜಮೀನ್ದಾರ. 1934-36ರಲ್ಲಿ ಆಗಿನ ಮುಂಬಯಿ ಸರ್ಕಾರದಲ್ಲಿ ಸಚಿವರಾಗಿದ್ದು ಆಮೇಲೆ ಜುನಾಗಢ ಸಂಸ್ಥಾನದ ದೀವಾನರಾಗಿದ್ದರು. ಜುನಾಗಢ ಸಂಸ್ಥಾನ ಸ್ವತಂತ್ರ ಭಾರತದಲ್ಲಿ ವಿಲೀನಗೊಂಡಾಗ ನವಾಜ್ ಖಾನ್ ಭುಟ್ಟೋ ತಮ್ಮ ಸಂಸಾರದೊಂದಿಗೆ ಪಾಕಿಸ್ತಾನಕ್ಕೆ ಹೋಗಿ ನೆಲಸಿದರು.

	ಜುಲ್‍ಫಿಕರ್ ಅಲಿ ಭುಟ್ಟೋರ ಪ್ರಾರಂಭಿಕ ವಿದ್ಯಾಭ್ಯಾಸ ಕರಾಚಿಯಲ್ಲಿ. ಅನಂತರ ಇವರು ಮುಂಬಯಿಯ ಕಥೀಡ್ರಲ್ ಮತ್ತು ಜಾನ್ ಕಾನನ್ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದರು. ಭುಟ್ಟೋ ಉನ್ನತ ಶಿಕ್ಷಣ ಗಳಿಸಿದ್ದು ಅಮೆರಿಕದಲ್ಲಿ. ಅನಂತರ ಇಂಗ್ಲೆಂಡಿನ ಆಕ್ಸಫರ್ಡಿನ ಕ್ರೈಸ್ಟ್ ಕಾಲೇಜ್ ವಿದ್ಯಾರ್ಥಿಯಾಗಿ ಲಂಡನ್ನಿನ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಕಾನೂನು ಬೋಧಕರಾಗಿದ್ದರು.

	ವಿದ್ಯಾರ್ಥಿದೆಶೆಯಿಂದಲೂ ಇವರಿಗೆ ರಾಜಕಾರಣದಲ್ಲಿ ಆಸಕ್ತಿ. ಕಥೀಡ್ರಲ್ ಶಾಲೆಯಲ್ಲಿದ್ದಾಗಲೇ ಇವರು ಜಿನ್ನಾರನ್ನು ಮೆಚ್ಚಿಕೊಂಡಿದ್ದರು. ಇವರು ಒಳ್ಳೆಯ ಕ್ರಿಕೆಟ್ ಆಟಗಾರ ಕೂಡ. ಮುಷ್ಟಕ್ ಅಲಿಯ ಆಟ ಇವರಿಗೆ ಪ್ರಿಯವಾಗಿತ್ತು. ಇಂಗ್ಲೆಂಡಿನಿಂದ ಭಾರತಕ್ಕೆ ಮರಳಿದ ಮೇಲೆ ಭುಟ್ಟೋ ಬ್ಯಾರಿಸ್ಟರ್ ವೃತ್ತಿ ಹಿಡಿದರು. ಆದರೆ ಈ ನ್ಯಾಯವಾದಿಗೆ ಅಷ್ಟೇನೂ ಸಂಪಾದನೆ ಇರಲಿಲ್ಲ. ಮನೆತನದ ಆಸ್ತಿ ಧಾರಾಳವಾಗಿತ್ತಾದ್ದರಿಂದ ಚಿಂತೆ ಇರಲಿಲ್ಲ.

	ಆಯೂಬ್ ಖಾನ್ ಪಾಕಿಸ್ತಾನದ ಅಧ್ಯಕ್ಷರಾದಾಗ 1958ರಲ್ಲಿ ಅವರ ಸರ್ಕಾರದಲ್ಲಿ ಭುಟ್ಟೊ ವಾಣಿಜ್ಯ ಮಂತ್ರಿಯಾಗಿ ನೇಮಕಗೊಂಡರು. ಸುಮಾರು ಎಂಟು ವರ್ಷಗಳ ಕಾಲ ನಾನಾ ಖಾತೆಗಳನ್ನು ನಿರ್ವಹಿಸಿದರು. 1965ರಲ್ಲಿ ಭಾರತ-ಪಾಕಿಸ್ತಾನ ಯುದ್ಧ ಸಂಭವಿಸಿತು. ಅನಂತರ ಅಧ್ಯಕ್ಷ ಅಯೂಬ್‍ಖಾನರು ಭಾರತದ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿಗಳೊಂದಿಗೆ ಸೋವಿಯತ್ ಒಕ್ಕೂಟದ ತಾಷ್ಕೆಂಟಿನಲ್ಲಿ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದಾಗ ಆಯೂಬ್‍ಖಾನ್ ಮತ್ತು ಭುಟ್ಟೋ ನಡುವೆ ವೈಮನಸ್ಯ ಉಂಟಾಯಿತು. ಅವರು ಈ ಒಪ್ಪಂದವನ್ನು ವಿರೋಧಿಸಿದರು. ಅನಂತರ ಮಂತ್ರಿ ಸ್ಥಾನಕ್ಕೆ ತ್ಯಾಗಪತ್ರ ನೀಡಿ ಪಾಕಿಸ್ತಾನ ಪ್ರಜಾಪಕ್ಷ ಎಂಬ ರಾಜಕೀಯ ಪಕ್ಷ ಕಟ್ಟಿಕೊಂಡರು. ಆಯೂಬರೊಂದಿಗೆ ವಿರೋಧ ಬೆಳೆದು ಕೊನೆಗೆ ಇವರು ಬಂಧನಕ್ಕೂ ಒಳಗಾಗಿದ್ದರು. ಅಯೂಬರನ್ನು ಕೆಳಗಿಳಿಸಿ ಯಹ್ಯಾಖಾನ್ ಪಾಕಿಸ್ತಾನದ ಅಧ್ಯಕ್ಷರಾದಾಗ ಭುಟ್ಟೋ ಮತ್ತೊಮ್ಮೆ ಪ್ರಭಾವ ಬೆಳೆಸಿಕೊಂಡರು. 1971ರಲ್ಲಿ ನಡೆದ ಚುನಾವಣೆಯಲ್ಲಿ ಪೂರ್ವಪಾಕಿಸ್ತಾನದಲ್ಲಿ ಷೇಖ್ ಮುಜಿಬುರ್ ರಹಮಾನರ ಪಕ್ಷವೂ ಪಶ್ಚಿಮ ಪಾಕಿಸ್ತಾನದಲ್ಲಿ ಭುಟ್ಟೋರ ಪಕ್ಷವೂ ಬಹುಮತ ಗಳಿಸಿದವು. ಒಟ್ಟಿನಲ್ಲಿ ಬಹುಮತ ಪಡೆದಿದ್ದ ಷೇಖ್ ಮುಜೀಬುರರ ಪಕ್ಷಕ್ಕೆ ಅಧಿಕಾರ ದೊರಕದಂತೆ ಭುಟ್ಟೋ ತಂತ್ರಹೂಡಿದರು. ಅಂತಿಮವಾಗಿ ಭಾರತದ ಮೇಲೆ ಯುದ್ಧದಲ್ಲಿ ತೊಡಗಿದ ಪಾಕಿಸ್ತಾನ ಪೂರ್ವಪಾಕಿಸ್ತಾನದ ಭಾಗವನ್ನು ಕಳೆದುಕೊಂಡಿತು. ಯಾಹ್ಯಾಖಾನ್ ಅಧಿಕಾರ ತ್ಯಾಗ ಮಾಡಿದಾಗ ಭುಟ್ಟೋ ಪಾಕಿಸ್ತಾನದ ಅಧ್ಯಕ್ಷರಾದರು. ತಾಷ್ಕೆಂಟ್ ಒಪ್ಪಂದವನ್ನು ಟೀಕಿಸಿದ್ದ ಭುಟ್ಟೋ ಅವರೇ ಮತ್ತೆ ಸಿಮ್ಲಾದಲ್ಲಿ ಭಾರತದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಬೇಕಾಯಿತು. 

	ಒಡೆದ ರಾಷ್ಟ್ರವನ್ನು ಪುನರ್ನಿರ್ಮಿಸುವ ಕಾರ್ಯದಲ್ಲಿ ಭುಟ್ಟೋ ತೊಡಗಿದರು. ಅದಕ್ಕೆ ಹೊಸ ಸಂವಿಧಾನವೊಂದನ್ನು ರೂಪಿಸಿ ಅದರ ಅಡಿಯಲ್ಲಿ ತಾವೇ ಪ್ರಧಾನಿಯಾದರು. 1977ರಲ್ಲಿ ಇವರು ನಡೆಸಿದ ಚುನಾವಣೆಯಲ್ಲಿ ತಮ್ಮ ಪಕ್ಷದ ಅಧಿಕಾರ ಉಳಿಸಿಕೊಳ್ಳುವ ಸಲುವಾಗಿ ಅನೇಕ ಅಕ್ರಮಗಳನ್ನು ನಡೆಸಿದರೆಂಬ ಕಾರಣದಿಂದ ಇಡೀ ದೇಶದಲ್ಲಿ ಇವರ ವಿರುದ್ಧ ವ್ಯಾಪಕ ಚಳವಳಿ ನಡೆಯಿತು. ಜನರಲ್ ಜಿಯಾ-ಉಲ್-ಹಕ್ಕರು ಅಧಿಕಾರ ಗ್ರಹಿಸಿ, ದೇಶದಲ್ಲಿ ಲಷ್ಕರಿ ಶಾಸನವನ್ನು ಜಾರಿಗೆ ತಂದರು. ಆಗ ಬಂಧನಕ್ಕೊಳಗಾದ ಭುಟ್ಟೋ ತಮ್ಮ ರಾಜಕೀಯ ವಿರೋಧಿಗಳ ಕೊಲೆ ಮಾಡಿಸುವ ಸಂಚು ಹೂಡಿದ ಆಪಾದನೆಗೆ ಗುರಿಯಾದರು. ನ್ಯಾಯಾಲಯ ಇವರಿಗೆ ಫಾಸಿ ಶಿಕ್ಷೆ ವಿಧಿಸಿತು (1979).

	ಜುಲ್‍ಫಿಕರ್ ಭುಟ್ಟೋ ಕಲಾಪ್ರೇಮಿ, ಸರಸವಿನೋದಿ, ಪ್ರಪಂಚಪರ್ಯಟನೆ ಮಾಡಿ ಅನುಭವ ಗಳಿಸಿದ್ದವರು, ಒಳ್ಳೆಯ ವಾಗ್ಮಿ. ಶೀಘ್ರ ಕೋಪಿಷ್ಠರು. ಭುಟ್ಟೋ ಪ್ರಜಾಪ್ರಭುತ್ವವಾದಿ ಸರ್ಕಾರದ ಮುಖ್ಯರಾಗಿದ್ದರೂ ಸರ್ವಾಧಿಕಾರಿಯಂತೆಯೇ ಮೆರೆದವರು. ಲಾರ್ಕಾನಾದ ಇವರ ಮನೆಯ ಗ್ರಂಥಾಲಯದಲ್ಲಿ ಫ್ರೆಂಚ್ ಸರ್ವಾಧಿಕಾರಿ ನೆಪೋಲಿಯನನನ್ನು ಕುರಿತು ಇದ್ದಷ್ಟು ಗ್ರಂಥಗಳು ಪ್ರಪಂಚದ ಬೇರಾವ ಗ್ರಂಥಾಲಯದಲ್ಲೂ ಇರಲಿಲ್ಲವೆಂದು ಪ್ರತೀತಿ.

	ಅಮೆರಿಕ ಚೀನ ಎರಡೂ ದೇಶಗಳೊಂದಿಗೆ ಸಖ್ಯ ಬೆಳಸಿ, ಭಾರತದೊಂದಿಗಿನ ದ್ವೇಷವನ್ನು ಜೀವಂತವಾಗಿಟ್ಟು ಅಧಿಕಾರ ಉಳಿಸಿಕೊಳ್ಳುವುದು ಭುಟ್ಟೋ ಮುಖ್ಯ ಧೋರಣೆಮಾಗಿತ್ತು. ಪ್ರಜಾಪ್ರಭುತ್ವವನ್ನೇ ಅಧಿಕಾರ ಲಾಲಸೆಗೆ ಬಳಸಿಕೊಳ್ಳಲು ಯತ್ನಿಸಿ, ಜನದ್ವೇಷದಿಂದಾಗಿ ಅಧಿಕಾರ ಕಳೆದುಕೊಂಡು, ಸರ್ವಾಧಿಕಾರದ ಅಡಿಯ ನ್ಯಾಯಾಲಯದಿಂದಾಗಿ ದೇಹಾಂತ ಶಿಕ್ಷೆಗೆ ಗುರಿಯಾದ ಭುಟ್ಟೋ ಅವರದು ವಿಷಾದಾಂತ ಜೀವನ. 					
			(ಎಚ್.ಎಸ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ